ಕೇಂದ್ರೀಯ ಪ್ರಯೋಗಾಲಯಗಳು

ಸ್ವಾತಂತ್ರ್ಯಾನಂತರದ ಭಾರತದಲ್ಲಿ ಕೇಂದ್ರ ಸರ್ಕಾರ ಆರಂಭಿಸಿ ನಡೆಸಿಕೊಂಡು ಬರುತ್ತಿರುವ ಅನ್ವಯ ವಿಜ್ಞಾನ ಸಂಶೋಧನಾಲಯಗಳು (ಸೆಂಟ್ರಲ್ ಲೆಬಾರ್ಟರೀಸ್). ಇವನ್ನು ರಾಷ್ಟ್ರೀಯ ಪ್ರಯೋಗಾಲಯಗಳೆಂದೂ ಕರೆಯುವರು. ಔದ್ಯೋಗಿಕ ಸಂಶೋಧನೆಗಳಿಗಾಗಿ ರಾಷ್ಟ್ರದ ಆಶ್ರಯದಲ್ಲಿ ಏರ್ಪಟ್ಟಿರುವ ಈ ಸಂಸ್ಥೆಗಳು ರಾಷ್ಟ್ರದ ಔದ್ಯೋಗಿಕ ಪ್ರಗತಿಗೂ ಆ ಮೂಲಕ ಆರ್ಥಿಕ ಬೆಳವಣಿಗೆಗೂ ಗಣನೀಯ ಪ್ರಮಾಣದಲ್ಲಿ ನೆರವಾಗುತ್ತಿವೆ; ಕಳೆದ ಇಪ್ಪತ್ತೆರಡು ವರ್ಷಗಳಿಂದ ರಾಷ್ಟ್ರದ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಅಗತ್ಯವಾದ ಔದ್ಯೋಗಿಕ ತಂತ್ರಶಾಸ್ತ್ರದ ಜ್ಞಾನವನ್ನೊದಗಿಸುತ್ತಿವೆ. ದೇಶೀಯ ಮೂಲವಸ್ತುಗಳನ್ನು ಕುರಿತು ಅವು ನಡೆಸುತ್ತಿರುವ ಅನ್ವೇಷಣೆ ಮತ್ತು ಸಂಶೋಧನೆಗಳೂ ಅವನ್ನು ಸಂಸ್ಕರಿಸುವ ವಿಧಾನಗಳನ್ನು ಇಲ್ಲಿನ ಸನ್ನಿವೇಶಗಳಿಗೆ ಹೊಂದಿಸಿಕೊಳ್ಳಲು ಸೂಚಿಸಿರುವ ಕಾರ್ಯವೂ ರಾಷ್ಟ್ರದಲ್ಲಿ ಅನೇಕ ಪ್ರಮುಖ ಉದ್ಯೋಗಗಳನ್ನು ಸ್ಥಾಪಿಸಲು ನೆರವಾಗಿವೆ.

	ಸದ್ಯದಲ್ಲಿ 37 ರಾಷ್ಟ್ರೀಯ ಪ್ರಯೋಗಾಲಯ, ಸಂಸ್ಥೆ ಅಥವಾ ಘಟಕಗಳೂ 3 ವಸ್ತುಸಂಗ್ರಹಾಲಯಗಳೂ ದೇಶದ ಬೇರೆ ಬೇರೆ ಭಾಗಗಳಲ್ಲಿ ಕೆಲಸ ಮಾಡುತ್ತಿವೆ. ಅವೆಲ್ಲ ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನ ಸಲಹಾ ಮಂಡಳಿಯ (ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್) ಆಡಳಿತಕ್ಕೊಳಪಟ್ಟಿವೆ. ಈ ಪ್ರಯೋಗಾಲಯಗಳಲ್ಲಿ ಒಂದೊಂದೂ ತನ್ನದೇ ಆದ ನಿರ್ದಿಷ್ಟವೂ ವಿಶಿಷ್ಟವೂ ಆದ ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನೆಗಳನ್ನು ನಡೆಸುತ್ತದೆ. ಇವುಗಳಲ್ಲಿ ಕೆಲವು ತಮ್ಮ ಸಂಶೋಧನೆಗೆ ನೆರವಾಗುವಂಥ ಪ್ರಾದೇಶಿಕ ಎರಕಹೊಯ್ಯುವ ಶಾಲೆಗಳನ್ನೂ ಔಷಧಿಕ್ಷೇತ್ರಗಳನ್ನೂ ಕಾರ್ಖಾನೆ ಮತ್ತು ಇತರ ಪ್ರಾದೇಶಿಕ ಕೇಂದ್ರಗಳನ್ನೂ ಹೊಂದಿವೆ.

	ವಿಜ್ಞಾನಿಗಳು, ಉದ್ಯೋಗಗಳ ಸ್ಥಾಪಕರು, ಉದ್ಯೋಗ ವಿಜ್ಞಾನಿಗಳು ಮುಂತಾದ ವಿಶಿಷ್ಟ ಸದಸ್ಯರನ್ನೊಳಗೊಂಡ ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನೆಯ ಮಂಡಳಿಯೊಂದು ಈ ಪ್ರಯೋಗಾಲಯಗಳು ನಡೆಸಬೇಕಾದ ಸಂಶೋಧನೆಗಳ ಯೋಜನೆಯನ್ನು ಆದ್ಯತೆಯ ಆಧಾರದ ಮೇಲೆ ಆರಿಸಿಕೊಳ್ಳುವುದು. ಈಚೆಗೆ ಅನ್ವಯ ಸಂಶೋಧನೆಗಳಿಗೆ ಹೆಚ್ಚಿನ ಪ್ರಾಮುಖ್ಯ ನೀಡಲಾಗುತ್ತಿದೆ. ದೇಶದ ಅವಶ್ಯಕತೆಗಳನ್ನನುಸರಿಸಿ ದೇಶದ ಸಂಪನ್ಮೂಲಗಳನ್ನು ಆದಷ್ಟು ಲಾಭದಾಯಕವಾಗಿ ಬೆಳೆಸಿಕೊಳ್ಳಲು ನೆರವಾಗುವಂಥ ಸಂಶೋಧನೆಗಳಿಗೆ ಹೆಚ್ಚಿನ ಅವಕಾಶ ಕೊಡುವಂತೆ ಅವುಗಳ ಕಾರ್ಯಕ್ರಮಗಳನ್ನು ಪುನರ್ರಚಿಸಲಾಗುತ್ತಿದೆ. ಪ್ರಯೋಗಾಲಯಗಳ ತಾಂತ್ರಿಕ ಜನಬಲವೂ ಉಪಕರಣಾದಿಗಳೂ ಆದಷ್ಟು ಫಲದಾಯಕವಾಗಿ ಕೆಲಸ ಮಾಡಲೆಂಬ ಉದ್ದೇಶದಿಂದ ಅವುಗಳ ಆಡಳಿತ ಮತ್ತು ನಿಯಂತ್ರಣದಲ್ಲೂ ಮಾರ್ಪಾಟುಗಳಾಗುತ್ತಿವೆ. ಈಗಾಗಲೇ ಈ ಪ್ರಯೋಗಾಲಯಗಳು ಔದ್ಯೋಗಿಕ ಕ್ಷೇತ್ರಕ್ಕೆ 270ಕ್ಕೂ ಹೆಚ್ಚು ಸಂಸ್ಕರಣವಿಧಾನಗಳನ್ನು ರೂಪಿಸಿ ಒದಗಿಸಿವೆ; ಅವುಗಳಲ್ಲಿ 135ಕ್ಕೂ ಹೆಚ್ಚು ವಿಧಾನಗಳು ಕಾರ್ಯಕ್ಷೇತ್ರದಲ್ಲಿ ಆಗಲೇ ಬೆಳಕಿಗೆ ಬಂದಿವೆ. ಜೊತೆಗೆ, ಇನ್ನೂ 250 ವಿಧಾನಗಳು ಪೂರ್ಣಗೊಂಡು ಕಾರ್ಯಕ್ಷೇತ್ರಕ್ಕೆ ಒದಗಬಹುದಾದ ಮಟ್ಟವನ್ನು ಮುಟ್ಟುತ್ತಿವೆ.

	1950ರಿಂದ ಅಸ್ತಿತ್ವಕ್ಕೆ ಬರಲಾರಂಭಿಸಿದ ಈ ಪ್ರಯೋಗಾಲಯಗಳೂ ಅವುಗಳ ಪ್ರಾದೇಶಿಕ ಕೇಂದ್ರಗಳೂ ರಾಷ್ಟ್ರದ ಆರ್ಥಿಕಾಭಿವೃದ್ಧಿಯಲ್ಲಿ ಗಣನೀಯ ಪಾತ್ರ ವಹಿಸುತ್ತಿರುವುದರಿಂದ ಅವುಗಳ ವ್ಯವಸ್ಥೆ ಮತ್ತು ಕಾರ್ಯನಿರ್ವಹಣೆಗಾಗಿ ರಾಷ್ಟ್ರ ಅಗಾಧ ಪ್ರಮಾಣದಲ್ಲಿ ಜನ ಮತ್ತು ಧನಮೂಲಗಳನ್ನು ತೊಡಗಿಸಿದೆ. ಮೊದಲು ಕೇವಲ 10-11 ಲಕ್ಷ ರೂಪಾಯಿಗಳ ವೆಚ್ಚದೊಂದಿಗೆ ಆರಂಭವಾದ ಈ ಬೃಹದ್ ಯೋಜನೆಗೆ ಈಗ ಪ್ರತಿವರ್ಷವೂ ಹದಿನೇಳು ಕೋಟಿಗೂ ಹೆಚ್ಚು ಹಣ ಖರ್ಚಾಗುತ್ತಿದೆ. ರಾಷ್ಟ್ರದ ಅನೇಕ ವಿಜ್ಞಾನಿಗಳೂ ತಂತ್ರಶಾಸ್ತ್ರಜ್ಞರೂ ಅಲ್ಲಿ ದುಡಿಯುತ್ತಿದ್ದಾರೆ. ಅವರ ದುಡಿಮೆಯ ಫಲವಾಗಿ ರಾಷ್ಟ್ರ ಹೂಡಿದ ಬಂಡವಾಳ ಈಗಾಗಲೇ ಒಳ್ಳೆಯ ಫಲ ನೀಡಲಾರಂಭಿಸಿದೆ. ಈ ಪ್ರಯೋಗಾಲಯಗಳು ಸ್ವಾಭಾವಿಕವಾಗಿ ಉದ್ಯೋಗಗಳೊಡನೆ ನಿಕಟ ಸಂಪರ್ಕವಿಟ್ಟುಕೊಂಡು ಕೆಲಸ ಮಾಡುತ್ತಿವೆ. ಅವುಗಳ ಸಮಸ್ಯೆಗಳನ್ನು ಅರಿತು ಅವನ್ನು ನಿವಾರಿಸಲು ನೆರವಾಗುವಂಥ ಸಂಶೋಧನೆಗಳನ್ನು ನಡೆಸಿ ಇಲ್ಲವೆ ಯಂತ್ರೋಪಕರಣಾದಿಗಳನ್ನು ರಚಿಸಿ ಕೊಟ್ಟು, ನೂತನ ಉತ್ಪನ್ನ ವಿಧಾನಗಳನ್ನು ತೋರಿಸಿಕೊಟ್ಟು ಉದ್ಯೋಗಗಳ ಪ್ರಗತಿಗೆ ನೆರವಾಗುತ್ತಿವೆ. ದೇಶದ ಸಂಪನ್ಮೂಲಗಳ ಅನ್ವೇಷಣೆ ಮತ್ತು ಸಂಸುಪನೆ ವಿಧಾನಗಳನ್ನು ರೂಪಿಸುವುದರ ಜೊತೆಗೆ ಆಮದು ಮಾಡಿಕೊಳ್ಳುವ ಅಥವಾ ಆಮದು ಮಾಡಿಕೊಳ್ಳಲು ದುರ್ಲಭವಾಗಿರುವ ವಸ್ತುಗಳಿಗೆ ಬದಲಾಗಿ ಬಳಸಬಹುದಾದ ಬದಲಿವಸ್ತುಗಳನ್ನು ತಯಾರಿಸುವುದು, ಉತ್ಪಾದನೀಯ ವಸ್ತುಗಳನ್ನು ರೂಪಿಸುವುದು, ಕೈಗಾರಿಕೋದ್ಯಮಿಗಳಿಗೆ ಬೇಕಾದ ಯಂತ್ರಗಳು, ಉಪಕರಣಗಳು ಮತ್ತು ಸಾಧನ ಸಲಕರಣೆಗಳನ್ನು ರೂಪಿಸಿ ರಚಿಸುವುದು ಇತ್ಯಾದಿ ಕಾರ್ಯಗಳ ಮೂಲಕ ಔದ್ಯೋಗಿಕ ಪ್ರಗತಿಗೂ ಆ ಮೂಲಕ ರಾಷ್ಟ್ರದ ಆರ್ಥಿಕ ಮುನ್ನಡೆಗೂ ನೆರವಾಗುತ್ತಿವೆ. ಅದುರು ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ಕೆಳದರ್ಜೆಯ ಅದುರುಗಳನ್ನು ಸಾರೀಕರಿಸುವ ಕಾರ್ಯ, ಅಪೇಕ್ಷಿತ ಮಟ್ಟದ ಕಲ್ಲಿದ್ದಲಿನ ಉತ್ಪಾದನೆ, ದೃಶ್ಯೋಪಕರಣಗಳ ಗಾಜುಗಳ (ದರ್ಶಕ ಗಾಜುಗಳ) ತಯಾರಿಕೆ, ಎಮ್ಮೆಯ ಹಾಲಿನಿಂದ ಮಕ್ಕಳ ಹಾಲನ್ನು ತಯಾರಿಸುವುದು, ಕಬ್ಬಿಣದ ಮಿಶ್ರಲೋಹಗಳನ್ನು ತಯಾರಿಸುವ ವಿಧಾನಗಳನ್ನು ರೂಪಿಸುವುದು, ಆಭ್ರಕ ಮತ್ತು ಪಿಂಗಾಣಿ ಮುಂತಾದ ಅವಾಹಕಗಳು ಮತ್ತು ಉಕ್ಕುಗಳು ಮೊದಲಾದ ವಸ್ತುಗಳ ಬದಲಾಗಿ ಉಪಯೋಗಿಸಬಹುದಾದ ಪ್ರತಿವಸ್ತುಗಳನ್ನು ರೂಪಿಸುವುದು, ವಿದ್ಯುತ್ ರಾಸಾಯನಿಕೋದ್ಯಮ, ಚರ್ಮ ಮತ್ತು ವಸ್ತ್ರೋದ್ಯಮಗಳಿಗೆ ನೆರವು ನೀಡುವುದು-ಈ ಕಾರ್ಯಗಳನ್ನೂ ನಿರ್ವಹಿಸುತ್ತಿವೆ. 

	ಸದ್ಯದ ಕೇಂದ್ರ ಪ್ರಯೋಗಾಲಯ ಅಥವಾ ಸಂಶೋಧನ ಸಂಸ್ಥೆಗಳ ಹೆಸರುಗಳನ್ನೂ ಅವು ಸ್ಥಾಪನೆಯಾದ ವರ್ಷ, ಸ್ಥಳ, ನಿರ್ವಹಿಸುತ್ತಿರುವ ಕಾರ್ಯದ ಸ್ವರೂಪ, ಹೊಂದಿರುವ ಪ್ರಾದೇಶಿಕ ಕೇಂದ್ರಗಳು-ಮುಂತಾದ ವಿವರಗಳನ್ನೂ ಮುಂದೆ ಕೊಟ್ಟಿದೆ.

1. ರಾಷ್ಟ್ರೀಯ ಭೌತಶಾಸ್ತ್ರ ಪ್ರಯೋಗಾಲಯ (ನ್ಯಾಷನಲ್ ಪಿಸಿಕಲ್ ಲೆಬಾರ್ಟರಿ), ನವದೆಹಲಿ (1950) : ಭೌತಶಾಸ್ತ್ರಕ್ಕೆ ಸಂಬಂಧಿಸಿದ ಮೂಲಭೂತ ಮತ್ತು ಅನ್ವಯ ಸಂಶೋಧನೆಗಳನ್ನು ನಡೆಸುತ್ತದೆ. ತೂಕ, ಅಳತೆ ಮೊದಲಾದ ಪ್ರಮಾಣಗಳ ಸಂರಕ್ಷಣೆಯಲ್ಲಿ ಅಗತ್ಯವಾದ ಪರೀಕ್ಷಾ ಸೌಲಭ್ಯಗಳನ್ನು ಒದಗಿಸುತ್ತದೆ.

2. ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯ (ನ್ಯಾಷನಲ್ ಕೆಮಿಕಲ್ ಲೆಬಾರ್ಟರಿ) ಪುಣೆ (1955) : ರಸಾಯನಶಾಸ್ತ್ರದ ಮೂಲಭೂತ ಮತ್ತು ಅನ್ವಯ ಸಂಶೋಧನೆಗಳು ಹಾಗೂ ಯಾವ ವಿಶಿಷ್ಟ ಕ್ಷೇತ್ರಗಳಿಗೆ ಇತರ ಪ್ರಯೋಗಾಲಯಗಳು ನೇಮಕವಾಗಿಲ್ಲವೊ ಆ ಕ್ಷೇತ್ರಗಳಿಗೆಲ್ಲ ಅನ್ವಯಿಸುವಂತೆ ಸಂಶೋಧನೆಗಳು ಇಲ್ಲಿ ನಡೆಯುತ್ತವೆ. ಟೈಪ್ ಕಲ್ಚರಿನ ರಾಷ್ಟ್ರೀಯ ಸಂಗ್ರಹಾಲಯವೂ ಈ ಸಂಶೋಧನಾಲಯದಲ್ಲಿದೆ.

3. ಕೇಂದ್ರೀಯ ಇಂಧನ ಸಂಶೋಧನ ಸಂಸ್ಥೆ (ಸೆಂಟ್ರಲ್ ಫ್ಯೂಯಲ್ ರಿಸರ್ಚ್ ಇನ್ಸ್ಟಿಟ್ಯೂಟ್), ಜೀಲ್ಗೋರ, ಬಿಹಾರ್ (1950) : ಘನ, ದ್ರವ ಮತ್ತು ಅನಿಲರೂಪದ ಇಂಧನಗಳನ್ನು ಕುರಿತ ಮೂಲಭೂತ ಮತ್ತು ಅನ್ವಯ ಸಂಶೋಧನೆಗಳನ್ನೂ ತನ್ನ ಏಳು ಕಲ್ಲಿದ್ದಲು ಸಮೀಕ್ಷಾ ಕೇಂದ್ರಗಳ ಮೂಲಕ ಭಾರತದ ಕಲ್ಲಿದ್ದಲು ನಿಕ್ಷೇಪಗಳಿಗೆ ಸಂಬಂಧಿಸಿದಂತೆ ಭೌತ ಮತ್ತು ರಸಾಯನ ವಿಭಾಗದ ಸಮೀಕ್ಷೆಗಳನ್ನೂ ನಡೆಸುತ್ತದೆ.

4. ಕೇಂದ್ರೀಯ ಗಾಜು ಮತ್ತು ಪಿಂಗಾಣಿ ಸಂಶೋಧನ ಸಂಸ್ಥೆ (ಸೆಂಟ್ರಲ್ ಗ್ಲಾಸ್ ಅಂಡ್ ಸೆರಾಮಿಕ್ ರಿಸರ್ಚ್ ಇನ್ಸ್ಟಿಟ್ಯೂಟ್), ಕಲ್ಕತ್ತ (1950) : ಗಾಜು, ಮಣ್ಣಿನ ಪಾತ್ರೆ, ಕುಲುಮೆ, ಗಾಜಿನಂಥ ಎನಾಮಿಲ್, ಆಭ್ರಕ ಮುಂತಾದವುಗಳ ವಿವಿಧ ಮುಖಗಳಿಗೆ ಸಂಬಂಧಿಸಿದ ಅನ್ವಯ ಸಂಶೋಧನೆ, ದೇಶೀಯ ಕಚ್ಚಾವಸ್ತುಗಳ ಗುಣ ನಿಷ್ಕರ್ಷೆ ಮತ್ತು ಬಳಕೆ, ಆಮದು ವಸ್ತುಗಳಿಗೆ ಬದಲಿ ವಸ್ತುಗಳ ನಿರ್ಮಾಣ, ಹೊಸ ಉತ್ಪನ್ನಗಳನ್ನೂ ವಿಧಾನಗಳನ್ನೂ ಕಂಡುಹಿಡಿಯುವುದು, ಔದ್ಯೋಗಿಕ ಉತ್ಪನ್ನಗಳ ಗುಣವರ್ಧನ ಮತ್ತು ಪ್ರಮಾಣೀಕರಣ-ಇವು ಇದರ ಕಾರ್ಯಕ್ಷೇತ್ರಗಳು. ಉದ್ಯೋಗಗಳಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ರೂಪಿಸಿ ಸಂಶೋಧನೆಗಳನ್ನು ನಡೆಸುವುದು ; ದರ್ಶಕ ಗಾಜುಗಳ ತಯಾರಿಕೆ ಮತ್ತು ವಿಕಿರಣ ಸಂರಕ್ಷಣೆಯ ವಾತಾಯನಗಳನ್ನು ತಯಾರಿಸುವ ಪರೀಕ್ಷಾ ಕಾರ್ಖಾನೆಗಳನ್ನು ನಡೆಸುವುದು-ಇದರ ಮುಖ್ಯ ಕೆಲಸಗಳು.

5. ಕೇಂದ್ರೀಯ ಆಹಾರ ಸಂಶೋಧನ ಸಂಸ್ಥೆ (ಸೆಂಟ್ರಲ್ ಫುಡ್ ಟೆಕ್ನಲಾಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್), ಮೈಸೂರು (1950) : ಆಹಾರದ ಉಪಯೋಗ ಮತ್ತು ರಕ್ಷಣೆ, ಆಹಾರದ ಎಂಜಿನಿಯರಿಂಗ್, ಹಣ್ಣಿನ ಉದ್ಯೋಗವಿಜ್ಞಾನದ ಎಲ್ಲ ಮುಖಗಳು-ಇವುಗಳಿಗೆ ಸಂಬಂಧಿಸಿದ ಸಂಶೋಧನೆ ನಡೆಸುತ್ತದೆ. ತಿರುಚೂರು, ನಾಗಪುರ, ಬೊಂಬಾಯಿ, ಲಖನೌ, ಮಂಗಳೂರು, ಸಿಮ್ಲ, ಜಮ್ಮು-ಟಾವಿ, ಕಡಪ-ಈ ಸ್ಥಳಗಳಲ್ಲಿ ಸ್ಥಳೀಯ ಹಣ್ಣು ಮತ್ತು ತರಕಾರಿಯ ಸಂರಕ್ಷಣ ಕೇಂದ್ರಗಳನ್ನು ಇದು ನಡೆಸುತ್ತಿದೆ.

6. ರಾಷ್ಟ್ರೀಯ ಧಾತು (ಲೋಹ) ವಿದ್ಯೆಯ ಪ್ರಯೋಗಾಲಯ (ನ್ಯಾಷನಲ್ ಮೆಟಲರ್ಜಿಕಲ್ ಲೆಬಾರ್ಟರಿ), ಜೆಮ್ಷಡ್ಪುರ (1950) : ಮೂಲಭೂತ ಮತ್ತು ಅನ್ವಯ ಧಾತು ವಿದ್ಯಾಸಂಶೋಧನೆಗಳನ್ನು ನಡೆಸುವುದರ ಜೊತೆಗೆ ಪಂಜಾಬ್, ತಮಿಳುನಾಡು ಮತ್ತು ಪಶ್ಚಿಮಬಂಗಾಳಗಳಲ್ಲಿ ನಾಲ್ಕು ಪ್ರಾದೇಶಿಕ ಎರಕಹೊಯ್ಯುವ ಕಾರ್ಯದ ಸಂಶೋಧನೆಯ ಕೇಂದ್ರಗಳನ್ನು ಇದು ನಡೆಸುತ್ತದೆ.

7. ಕೇಂದ್ರೀಯ ಔಷಧ ಸಂಶೋಧನ ಸಂಸ್ಥೆ (ಸೆಂಟ್ರಲ್ ಡ್ರಗ್ ರಿಸರ್ಚ್ ಇನ್ಸ್ಟಿಟ್ಯೂಟ್), ಲಖನೌ (1951) : ಕಚ್ಚಾ ಔಷಧಗಳ ಮೌಲ್ಯ ನಿಷ್ಕರ್ಷೆ ಮತ್ತು ಪ್ರಮಾಣೀಕರಣ, ಔಷಧವಸ್ತುಗಳನ್ನು ಶಾಸ್ತ್ರೀಯವಾಗಿ ತಯಾರಿಸುವುದು ಸಂಯೋಜಿತ ಔಷಧವಸ್ತುಗಳನ್ನು ತಯಾರಿಸುವುದು, ಜೀವರಸಾಯನಶಾಸ್ತ್ರ, ಜೀವಭೌತಶಾಸ್ತ್ರ, ಸೋಂಕುರಕ್ಷಾಶಾಸ್ತ್ರ, ಸಾಂಕ್ರಾಮಿಕ ರೋಗಗಳು, ಔಷಧಶಾಸ್ತ್ರ, ರಾಸಾಯನಿಕ ಚಿಕಿತ್ಸೆ, ಪ್ರಯೋಗಾರ್ಥ ಔಷಧಗಳ ನಿರ್ಮಾಣ-ಇತ್ಯಾದಿಗಳನ್ನೊಳಗೊಂಡಂತೆ. ವೈದ್ಯಶಾಸ್ತ್ರಕ್ಕೆ ಸಂಬಂಧಿಸಿದ ಎಲ್ಲ ಮುಖಗಳ ಸಂಶೋಧನೆ ನಡೆಸುವುದು ಈ ಸಂಸ್ಥೆಯ ಕೆಲಸ.

8. ಕೇಂದ್ರೀಯ ರಸ್ತೆ ಸಂಶೋಧನ ಸಂಸ್ಥೆ (ಸೆಂಟ್ರಲ್ ರೋಡ್ ರಿಸರ್ಚ್ ಇನ್ಸ್ಟಿಟ್ಯೂಟ್), ನವದೆಹಲಿ (1952) : ರಸ್ತೆ ನಿರ್ಮಾಣದಲ್ಲಿ ಬಳಸುವ ವಸ್ತುಗಳನ್ನು ಕುರಿತು ಸಂಶೋಧನೆ ನಡೆಸುವುದು; ಆ ವಸ್ತುಗಳನ್ನೂ ರಸ್ತೆಗಳ ನೆಲವನ್ನೂ ಪರೀಕ್ಷೆ ನಡೆಸುವುದು ಇದರ ಕೆಲಸ.

9. ಕೇಂದ್ರೀಯ ವಿದ್ಯುದ್ರಸಾಯನ ಸಂಶೋಧನ ಸಂಸ್ಥೆ (ಸೆಂಟ್ರಲ್ ಎಲೆಕ್ಟ್ರೋ ಕೆಮಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್), ಕಾರೈಕುಡಿ (1953) : ವಿದ್ಯುತ್ ಲೋಹಶಾಸ್ತ್ರ, ವಿದ್ಯತ್ ಲೇಪನ, ಮತ್ತು ಸಂಬಂಧಿಸಿದ ಇತರ ವಿಷಯಗಳನ್ನೊಳಗೊಂಡಂತೆ ವಿದ್ಯುದ್ರಸಾಯನಶಾಸ್ತ್ರದ ವಿವಿಧ ಮುಖಗಳನ್ನು ಕುರಿತು ಸಂಶೋಧನೆಗಳನ್ನು ನಡೆಸುವುದು. ಮದ್ರಾಸು ಮತ್ತು ರಾಮನಾಥಪುರಗಳಲ್ಲಿ ಈ ಸಂಸ್ಥೆ ಎರಡು ಪರೀಕ್ಷಾ ಕೇಂದ್ರಗಳನ್ನು ನಡೆಸುತ್ತಿದೆ.

  10. ಕೇಂದ್ರೀಯ ಚರ್ಮ ಸಂಶೋಧನ ಸಂಸ್ಥೆ (ಸೆಂಟ್ರಲ್ ಲೆದರ್ ರಿಸರ್ಚ್ ಇನ್ಸ್ಟಿಟ್ಯೂಟ್), ಮದ್ರಾಸು (1953) : ಚರ್ಮಶಿಲ್ಪಶಾಸ್ತ್ರಕ್ಕೆ ಸಂಬಂಧಿಸಿದಂತೆ ಮೂಲಭೂತ ಮತ್ತು ಅನ್ವಯ ಸಂಶೋಧನೆಗಳನ್ನು ನಡೆಸುವುದು. ಕಲ್ಕತ್ತ, ರಾಜಕೋಟೆ, ಜಲಂಧರ್. ಕಾನ್ಪುರ ಮತ್ತು ಬೊಂಬಾಯಿ-ಈ ಸ್ಥಳಗಳಲ್ಲಿ ಸಂಸ್ಥೆ ತನ್ನ ಪ್ರಸಾರ ಕೇಂದ್ರಗಳನ್ನು ಹೊಂದಿದೆ.

  11. ಕೇಂದ್ರೀಯ ಕಟ್ಟಡ ನಿರ್ಮಾಣ ಸಂಶೋಧನ ಸಂಸ್ಥೆ (ಸೆಂಟ್ರಲ್ ಬಿಲ್ಡಂಗ್ ರಿಸರ್ಚ್ ಇನ್ಸ್ಟಿಟ್ಯೂಟ್), ರೂರ್ಕಿ (1953): ಕಟ್ಟಡಗಳ ಶಿಲ್ಪ, ರಚನೆ ಮತ್ತು ವಸತಿ ಸೌಲಭ್ಯ-ಇವನ್ನು ಕುರಿತು ಸಂಶೋಧನೆ ನಡೆಸುವುದು.

  12. ಕೇಂದ್ರೀಯ ಎಲೆಕ್ಟ್ರಾನಿಕ್ಸ್ ಸಂಶೋಧನ ಸಂಸ್ಥೆ (ಸೆಂಟ್ರಲ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್), ಪಿಲಾನಿ (1953) : ಎಲೆಕ್ಟ್ರಾನಿಕ್ ಉಪಕರಣಗಳ ಮತ್ತು ಭಾಗಗಳ ನಮೂನೆ ತಯಾರಿಸುವುದು ಮತ್ತು ಉಪಕರಣಗಳನ್ನು ಪರೀಕ್ಷಿಸುವುದು.

  13. ರಾಷ್ಟ್ರೀಯ ಸಸ್ಯಶಾಸ್ತ್ರೋದ್ಯಾನ (ನ್ಯಾಷನಲ್ ಬೊಟ್ಯಾನಿಕ್ ಗಾರ್ಡನ್ಸ್), ಲಖನೌ (1953) : ಔದ್ಯೋಗಿಕ ಪ್ರಾಮುಖ್ಯದ ಔಷಧಿ ಸಸ್ಯಗಳನ್ನು ಸಂಗ್ರಹಿಸುವುದು ಮತ್ತು ವ್ಯವಸಾಯ ಮಾಡುವುದು.

  14. ಕೇಂದ್ರೀಯ ಲವಣ ಮತ್ತು ಸಾಗರ ರಸಾಯನ ಸಂಶೋಧನ ಸಂಸ್ಥೆ (ಸೆಂಟ್ರಲ್ ಸಾಲ್ಟ್ ಅಂಡ್ ಮರೀನ್ ಕೆಮಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್), ಭಾವನಗರ (1954) : ಶುದ್ಧ ಲವಣದ (ಉಪ್ಪು) ಅನ್ವೇಷಣೆ ಮತ್ತು ತಯಾರಿಕೆ, ತಯಾರಿಕೆಯ ವೆಚ್ಚವನ್ನು ತಗ್ಗಿಸುವಿಕೆ, ಲವಣ ತಯಾರಿಕೆಯ ಉಪ ಉತ್ಪನ್ನಗಳನ್ನು ಲಾಭದಾಯಕವಾಗಿ ಬಳಸಿಕೊಳ್ಳುವಿಕೆ, ಅವನ್ನು ಪ್ರತ್ಯೇಕಿಸಿ ಸಂಗ್ರಹಿಸುವ ಹೊಸ ತಂತ್ರ ಮತ್ತು ವಿಧಾನಗಳನ್ನು ರೂಪಿಸುವುದು, ಸಾಗರಜಲದ ಉತ್ಪನ್ನಗಳನ್ನೂ ಸಂಬಂಧಿಸಿದ ಇತರ ರಸಾಯನಿಕ ವಸ್ತುಗಳನ್ನೂ ತಯಾರಿಸುವುದು ಮತ್ತು ಬಳಸಿಕೊಳ್ಳುವುದು-ಈ ಕಾರ್ಯಗಳಿಗಾಗಿ ಸಂಸ್ಥೆ ಮೀಸಲಾಗಿದೆ.

  15. ಕೇಂದ್ರೀಯ ಗಣಿಕಾರ್ಯ (ಖನಿಜಕರ್ಮ) ಸಂಶೋಧನ ನಿಲಯ (ಸೆಂಟ್ರಲ್ ಮೈನಿಂಗ್ ರಿಸರ್ಚ್ ಸ್ಟೇಷನ್), ಧನ್ಬಾದ್ (1956) : ಗಣಿಕೆಲಸದ ವಿಧಾನಗಳು, ಗಣಿಗಳಲ್ಲಿ ಕ್ಷೇಮಪಾಲನೆ, ಗಣಿಕೆಲಸದ ಉಪಕರಣಗಳು-ಇವನ್ನು ಕುರಿತು ಸಂಶೋಧನೆಗಳನ್ನು ನಡೆಸುವುದು.

  16. ಪ್ರಾದೇಶಿಕ ಸಂಶೋಧನಾಲಯ (ರೀಜನಲ್ ರಿಸರ್ಚ್ ಲೆಬಾರ್ಟರಿ), ಹೈದರಾಬಾದ್ : ಆ ಪ್ರದೇಶದ ಉದ್ಯೋಗಗಳು ಮತ್ತು ಕಚ್ಚಾವಸ್ತುಗಳನ್ನು ಕುರಿತ ಸಂಶೋಧನೆಗಳನ್ನು ನಡೆಸುವುದು.

  17. ಜೀವರಸಾಯನಶಾಸ್ತ್ರ ಮತ್ತು ಪ್ರಯೋಗಾರ್ಥ ಔಷಧಿ ಶಾಸ್ತ್ರಗಳ ಭಾರತೀಯ ಸಂಸ್ಥೆ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಬಯೊಕೆಮಿಸ್ಟ್ರಿ ಅಂಡ್ ಎಕ್ಸ್‍ಪೆರಿಮೆಂಟಲ್ ಮೆಡಿಸನ್), ಕಲ್ಕತ್ತ (1956) : ಜೀವರಸಾಯನಶಾಸ್ತ್ರ, ದಂಡಾಣುಶಾಸ್ತ್ರ-ಇತ್ಯಾದಿಯಾದ ಔಷಧಿಶಾಸ್ತ್ರಕ್ಕೆ ಸಂಬಂಧಿಸಿದ ಸಂಶೋಧನೆಗಳನ್ನು ನಡೆಸುವುದು.

  18. ಔದ್ಯೋಗಿಕ ಮತ್ತು ತಂತ್ರಶಾಸ್ತ್ರದ ಬಿರ್ಲಾ ವಸ್ತುಸಂಗ್ರಹಾಲಯ (ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಅಂಡ್ ಟೆಕ್ನಾಲಾಜಿಕಲ್ ಮ್ಯೂಸಿಯಂ), ಕಲ್ಕತ್ತ : ವೈಜ್ಞಾನಿಕ ಮತ್ತು ತಂತ್ರಶಾಸ್ತ್ರದ ಪ್ರಗತಿಯನ್ನು ಚಿತ್ರಿಸುವ ವಸ್ತುಗಳ ಸಂಗ್ರಹಾಲಯವಿದು.

  19. ಪ್ರಾದೇಶಿಕ ಸಂಶೋಧನ ಪ್ರಯೋಗಾಲಯ (ರೀಜನಲ್ ರಿಸರ್ಚ್ ಲೆಬಾರ್ಟರಿ). ಜಮ್ಮು-ಟಾವಿ (1957) : ಈ ಪ್ರದೇಶದ ಉದ್ಯೋಗಗಳನ್ನೂ ಕಚ್ಚಾವಸ್ತುಗಳನ್ನೂ ಹಿಮಾಲಯದ ವೈದ್ಯಕೀಯ ಸಸ್ಯಗಳನ್ನೂ ಕುರಿತು ಸಂಶೋಧನೆ ನಡೆಸುವುದು.

  20. ಕೇಂದ್ರೀಯ ಯಂತ್ರಶಿಲ್ಪ ಸಂಶೋಧನ ಸಂಸ್ಥೆ (ಸೆಂಟ್ರಲ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್), ದುರ್ಗಾಪುರ (1958) : ಯಂತ್ರ ಶಿಲ್ಪಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಸಂಶೋಧನೆಗಳನ್ನೂ ನಡೆಸುವುದು : ಲೂಧಿಯಾನ, ಪುಣೆ ಮತ್ತು ಮದ್ರಾಸುಗಳಲ್ಲಿ ಯಂತ್ರಶಿಲ್ಪದ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ನಡೆಸುತ್ತಿದೆ.

   21. ಕೇಂದ್ರೀಯ ಸಾರ್ವಜನಿಕ ಆರೋಗ್ಯ ಸಂಶೋಧನ ಸಂಸ್ಥೆ (ಸೆಂಟ್ರಲ್ ಪಬ್ಲಿಕ್ ಹೆಲ್ತ್ ಎಂಜಿನಿಯರಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್), ನಾಗಪುರ (1958) : ಸಾರ್ವಜನಿಕ ಆರೋಗ್ಯದ ಎಂಜಿನಿಯರಿಂಗ್ ಮತ್ತು ಅನುಬಂಧಿ ಸಂಸ್ಥೆಗಳ ಕಾರ್ಯದಲ್ಲಿ ಸಮೀಕರಣಕ್ಕೆ ಸಂಬಂಧಿಸಿದ ಎಲ್ಲ ಮುಖಗಳಿಗೂ ಸೇರಿದಂತೆ ಸಂಶೋಧನೆ ನಡೆಸುವುದು. ಅಹಮದಾಬಾದ್ ಮತ್ತು ಬೊಂಬಾಯಿ ನಗರಗಳಲ್ಲಿ ಕ್ಷೇತ್ರೀಯ ಕೇಂದ್ರಗಳನ್ನೂ ಘಟಕಗಳನ್ನೂ ಈ ಸಂಸ್ಥೆ ವ್ಯವಸ್ಥೆಗೊಳಿಸಿದೆ.

  22. ರಾಷ್ಟ್ರೀಯ ವಾಯುಯಾನ ವಿಜ್ಞಾನ ಪ್ರಯೋಗಾಲಯ (ನ್ಯಾಷನಲ್ ಏರೋನಾಟಿಕಲ್ ಲೆಬಾರ್ಟರಿ), ಬೆಂಗಳೂರು (1959) : ಭಾರತದಲ್ಲಿ ವಿಮಾನದ ರಚನೆ, ನಮೂನೆ ಮತ್ತು ಚಲನೆಗೆ ಅನುಕೂಲಿಸುವಂತೆ ವಿಮಾನಯಾನ ಸಮಸ್ಯೆಗಳಿಗೆ ಸಂಬಂಧಿಸಿದ ಸಂಶೋಧನೆ ನಡೆಸುವುದು.

  23. ಪ್ರಾದೇಶಿಕ ಸಂಶೋಧನ ಪ್ರಯೋಗಾಲಯ (ರೀಜನಲ್ ರಿಸರ್ಚ್ ಲೆಬಾರ್ಟರಿ), ಜೊರ್ಹಾತ್ (1959) : ಅಸ್ಸಾಂ ಮತ್ತು ಸುತ್ತಣ ಪ್ರದೇಶದ ಸಂಪನ್ಮೂಲಗಳನ್ನು ಹೆಚ್ಚು ಸಮರ್ಪಕವಾಗಿ ಬಳಸಿಕೊಂಡು ಎಚ್ಚರಿಕೆಯಿಂದ ಸಂರಕ್ಷಿಸಿಕೊಂಡು ಬರುವುದರ ಮೂಲಕ ಅಲ್ಲಿನ ಔದ್ಯೋಗಿಕ ಪ್ರಗತಿಗೆ ನೆರವಾಗುವುದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕುರಿತು ಸಂಶೋಧನೆ ನಡೆಸುವುದು

  24. ಪ್ರಾದೇಶಿಕ ಸಂಶೋಧನ ಪ್ರಯೋಗಾಲಯ (ರೀಜನಲ್ ರಿಸರ್ಚ್ ಲೆಬಾರ್ಟರಿ), ಭುವನೇಶ್ವರ (1964) : ಸ್ಥಳೀಯ ಉದ್ಯೋಗಗಳಿಗೆ ನೆರವಾಗಬಲ್ಲ ಅಂಶಗಳನ್ನು ಕುರಿತು ಸಂಶೋಧನೆ ನಡೆಸಿ ಅಲ್ಲಿನ ಉದ್ಯೋಗಿಗಳ ಪ್ರಗತಿಗೆ ನೆರವಾಗುವುದು ಮತ್ತು ತನ್ಮೂಲಕ ಅಲ್ಲಿ ಉತ್ಪನ್ನವಾದ ವಸ್ತುಗಳನ್ನು ಪರೀಕ್ಷಿಸಿ ಗುಣನಿಯಂತ್ರಣ ಮಾಡುವುದು.

   25. ಕೇಂದ್ರೀಯ ಔಷಧೀಯ ವನಸ್ಪತಿಗಳ ಸಂಸ್ಥೆ (ಸೆಂಟ್ರಲ್ ಇಂಡಿಯನ್ ಮೆಡಿಸನಲ್ ಪ್ಲಾಂಟ್ಸ್ ಆರ್ಗನೈಸೇಷನ್), ಲಖನೌ: ಔಷಧೀಯ ಸಸ್ಯಗಳನ್ನು ವ್ಯವಸಾಯ ಮಾಡಿ ಬಳಕೆಗೆ ತರುವ ಕಾರ್ಯಕ್ಕೆ ನೆರವಾಗುತ್ತ ಆ ಕಾರ್ಯದಲ್ಲಿ ಸಮಾಯೋಜನೆಯನ್ನು ಸಾಧಿಸುವುದು ; ಮತ್ತು ದೇಶೀಯ ಔಷಧಿಗಳಿಗೆ ಬೇಕಾಗುವ ವನಸ್ಪತಿ ಸಂಪನ್ಮೂಲಗಳನ್ನು ವೃದ್ಧಿಪಡಿಸುವುದು. ಇದು ಬೆಂಗಳೂರು ಮತ್ತು ಹಲದ್ವಾನಿಗಳಲ್ಲಿ (ಉ.ಪ್ರ.) ಎರಡು ವಲಯ ಕೇಂದ್ರಗಳನ್ನೂ ಜಮ್ಮು ಮತ್ತು ಕಾಶ್ಮೀರಗಳಲ್ಲಿ ನಾಲ್ಕು ವನಸ್ಪತಿ ಉದ್ಯಾನಗಳನ್ನೂ ಔಷಧಿ ನಿರ್ಮಾಣ ಕೇಂದ್ರಗಳನ್ನೂ ನಡೆಸುತ್ತಿದೆ.

  26. ಕೇಂದ್ರೀಯ ವೈಜ್ಞಾನಿಕ ಉಪಕರಣ ಸಂಸ್ಥೆ (ಸೆಂಟ್ರಲ್ ಸೈಂಟಿಫಿಕ್ ಇನ್ಸ್ಟ್ರುಮೆಂಟ್ ಆರ್ಗನೈಸೇಷನ್), ಚಂಡೀಘರ್ (1959) : ಬೋಧನೆ, ಸಂಶೋಧನೆ ಮತ್ತು ಕಾರ್ಖಾನೆಗಳಿಗೆ ಬೇಕಾಗುವ ವೈಜ್ಞಾನಿಕ ಉಪಕರಣಗಳನ್ನು ಅಭಿವೃದ್ಧಿಪಡಿಸಿ ಉತ್ಪಾದಿಸುವ ಕಾರ್ಯನಿರ್ವಹಿಸುವುದು. ಇದು ತನ್ನ ಸೇವಾ ಕೆಂದ್ರಗಳನ್ನು ನವದೆಹಲಿಯಲ್ಲೂ ಮದ್ರಾಸಿನಲ್ಲೂ ನಡೆಸುತ್ತಿದೆ.

  27. ಭಾರತೀಯ ಪೆಟ್ರೋಲಿಯಂ ಸಂಸ್ಥೆ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ), ಡೆಹರಾಡೂನ್ (1959): ಪೆಟ್ರೋಲ್ ಎಣ್ಣೆಯ ಶುದ್ಧೀಕರಣಕ್ಕೂ ಸ್ವಾಭಾವಿಕ (ಇಂಧನದ) ಅನಿಲಗಳನ್ನು ಬಳಸುವ ವಿಧಾನಗಳಿಗೂ ಸಂಬಂಧಿಸಿದ ಸಂಶೋಧನೆಗಳನ್ನು ನಡೆಸುವುದು ; ಮತ್ತು ರಾಷ್ಟ್ರದ ತೈಲೋದ್ಯಮಕ್ಕೆ ಬೇಕಾದ ಸಿಬ್ಬಂದಿಗೆ ತರಬೇತು ನೀಡುವುದು.

  28. ರಾಷ್ಟ್ರೀಯ ಭೂಭೌತ ಸಂಶೋಧನ ಸಂಸ್ಥೆ (ನ್ಯಾಷನಲ್ ಜಿಯೊಫಿಸಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್), ಹೈದರಾಬಾದ್ (1961) : ಭಾರತದ ಭೂಭೌತ ಮೇಲ್ಪದರದ ರಚನೆಯ ಸ್ವರೂಪವನ್ನು ತಿಳಿದುಕೊಳ್ಳಲು ಗುರುತ್ವಾಕರ್ಷಣೆಯ, ಕಾಂತೀಯತೆಯ, ವಿದ್ಯುಚ್ಛಕ್ತಿಯ ಮತ್ತು ಭೂಕಂಪನಶಕ್ತಿಯ ಸಮೀಕ್ಷೆಗಳನ್ನು ನಡೆಸುವುದು; ಮತ್ತು ಆ ಮುಖವಾದ ಪರೀಕ್ಷೆ ನಡೆಸಲು ಬೇಕಾದ ಉಪಕರಣಾದಿಗಳನ್ನು ಉತ್ತಮ ಪಡಿಸುವುದು.

   29. ರಾಷ್ಟ್ರೀಯ ಸಾಗರಶಾಸ್ತ್ರ ಸಂಸ್ಥೆ (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷನಾಗ್ರಫಿ), ಪಣಜಿ : ಸಾಗರದ ತಳದಲ್ಲಿನ ಪೆಟ್ರೋಲಿಯಂ ಎಣ್ಣೆಯನ್ನು ಹುಡುಕುವುದನ್ನೊಳಗೊಂಡಂತೆ ಸಾಗರ ವಿವರಣೆಗೆ ಸಂಬಂಧಿಸಿದ ಭೌತಿಕ, ರಾಸಾಯನಿಕ, ಜೈವಿಕ ಮತ್ತು ಭೂವೈಜ್ಞಾನಿಕ ಅಂಶಗಳನ್ನು ಕುರಿತು ಸಂಶೋಧನೆ ನಡೆಸುವುದು; ಇದು ಎರ್ನಾಕುಲಂನಲ್ಲಿ ಭಾರತೀಯ ಜೀವಶಾಸ್ತ್ರ ಕೇಂದ್ರವನ್ನೂ (ಇಂಡಿಯನ್ ಬಯಲಾಜಿಕಲ್ ಸೆಂಟರ್) ಅಂತರರಾಷ್ಟ್ರೀಯ ಜೀವಶಾಸ್ತ್ರ ಕಾರ್ಯಕ್ರಮವನ್ನೂ (ಇಂಟನ್ರ್ಯಾಷನಲ್ ಬಯಲಾಜಿಕಲ್ ಪ್ರೋಗ್ರಾಮ್) ಒಳಗೊಂಡ ಭಾರತೀಯ ಸಾಗರದ ಭೌತಶಾಸ್ತ್ರ ವಿವರಣ ಕೇಂದ್ರವನ್ನೂ ನಡೆಸುತ್ತಿದೆ.

   30. ರಾಷ್ಟ್ರೀಯ ಜೀವಶಾಸ್ತ್ರೀಯ ಪ್ರಯೋಗಾಲಯ (ನ್ಯಾಷನಲ್ ಬಯಲಾಜಿಕಲ್ ಲೆಬಾರ್ಟರಿ), ಪಾಲಂಪುರ (ಹಿಮಾಚಲ ಪ್ರದೇಶ) : ಜೀವವಿಜ್ಞಾನದ ಆಧುನಿಕ ಸಮಸ್ಯೆಗಳನ್ನು ಕುರಿತಂತೆ ಮೂಲಭೂತ ಮತ್ತು ಅನ್ವಯ ಸಂಶೋಧನೆಗಳನ್ನು ನಡೆಸುವುದು.

   31. ರಚನಾಶಿಲ್ಪ ಸಂಶೋಧನ ಕೇಂದ್ರ (ಸ್ಟ್ರಕ್ಚರಲ್ ಎಂಜಿನಿಯರಿಂಗ್ ರಿಸರ್ಚ್ ಸೆಂಟರ್), ರೂರ್ಕಿ (1965) : ಭವನ, ಸೇತುವೆ ಮತ್ತು ಇತರ ಕಟ್ಟಡಗಳ ರಚನಾ ಸಮಸ್ಯೆಗಳಿಗೆ ಸಂಬಂಧಿಸಿದ ವಿಶಿಷ್ಟ ನಮೂನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕುರಿತು ಸಂಶೋಧನ ನಡೆಸುವುದು.

  32. ಔದ್ಯೋಗಿಕ ವಿಷವಿಜ್ಞಾನದ ಸಂಶೋಧನ ಕೇಂದ್ರ (ಇಂಡಸ್ಟ್ರಿಯಲ್ ಟ್ಯಾಕ್ಸೋಲೋಜಿಕಲ್ ರಿಸರ್ಚ್ ಸೆಂಟರ್), ಲಖನೌ: ಚರ್ಮ, ರಕ್ತ, ಜಠರ, ಕರುಳುನಾಳ, ಕೇಂದ್ರೀಯ ನರಮಂಡಲ, ಮೂಳೆ ಇತ್ಯಾದಿ ಅಂಗಗಳ ಮೇಲೆ ಔದ್ಯೋಗಿಕ ವಿಷಗಳು ಉಂಟುಮಾಡಬಹುದಾದ ಪರಿಣಾಮಗಳನ್ನು ಕುರಿತ ಸಂಶೋಧನೆ ನಡೆಸುವುದು.

  23. ವಿಶ್ವೇಶ್ವರಯ್ಯ ಔದ್ಯಮಿಕ ಮತ್ತು ಔದ್ಯೋಗಿಕ ವಿಜ್ಞಾನದ ವಸ್ತು ಸಂಗ್ರಹಾಲಯ (ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಅಂಡ್ ಟೆಕ್ನಲಾಜಿಕಲ್ ಮ್ಯೂಸಿಯಂ), ಬೆಂಗಳೂರು : ವೈಜ್ಞಾನಿಕ ಮತ್ತು ಔದ್ಯೋಗಿಕ ವಿಜ್ಞಾನದ ಪ್ರಗತಿಯನ್ನು ವರ್ಣಿಸುವ ಅಂಶಗಳನ್ನು ಸಂಗ್ರಹಿಸಿಡುವುದು.

  34. ವೈಜಾನಿಕ ಮತ್ತು ತಾಂತ್ರಿಕ ಸಿಬ್ಬಂದಿ (ಸೈಂಟಿಫಿಕ್ ಅಂಡ್ ಟೆಕ್ನಿಕಲ್ ಪರ್ಸನೆಲ್), ನವದೆಹಲಿ : ಪ್ರಯೋಗಾಲಯಗಳಿಗೂ ಇತರ ಸಂಶೋಧನ ಸಂಸ್ಥೆಗಳಿಗೂ ವಿಶೇಷ ಸಿಬ್ಬಂದಿ ಅಗತ್ಯ. ವಿಶ್ವವಿದ್ಯಾಲಯದ ಸ್ನಾತಕೋತ್ತರ ಶಿಕ್ಷಣ ವಿಭಾಗಗಳು ಅವರನ್ನು ಒದಗಿಸುವ ಪ್ರಮುಖ ಕರ್ತವ್ಯವನ್ನು ಹೊತ್ತಿವೆ. ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನ ಸಲಹಾ ಮಂಡಲಿ ಅಂಥ ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ರಾಷ್ಟ್ರದ ಉದ್ಯೋಗಗಳಿಗೂ ಇತರ ಸಂಸ್ಥೆಗಳಿಗೂ ಒದಗಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿ ರಾಷ್ಟ್ರದ ವಿಜ್ಞಾನಿಗಳ, ತಂತ್ರಜ್ಞರ, ಎಂಜಿನಿಯರುಗಳ ಉದ್ಯೋಗ ವಿಜ್ಞಾನಿಗಳ, ವೈದ್ಯರ, ಸಾಮಾಜಿಕ ವಿಜ್ಞಾನಿಗಳ ಒಂದು ನೋಂದಣಿಯನ್ನು ಈ ಸಂಸ್ಥೆ ಇಟ್ಟಿರುತ್ತದೆ. ಈ ದಾಖಲಾತಿಯಲ್ಲಿರುವ ವಿಶೇಷ ಸಿಬ್ಬಂದಿಯನ್ನು ಆಧಾರ ಮಾಡಿಕೊಂಡು ದೇಶದ ವೈಜ್ಞಾನಿಕ ಮತ್ತು ತಾಂತ್ರಿಕ ಜನಶಕ್ತಿಯ ಸಾಮಾನ್ಯ ಮತ್ತು ವಿಶಿಷ್ಟ ಲಕ್ಷಣಗಳನ್ನೂ ಆ ಜನಶಕ್ತಿಯ ಬಳಕೆ ಅಥವಾ ಅದರ ನಷ್ಟ-ಇತ್ಯಾದಿಗಳನ್ನೂ ಕುರಿತು ಸಂಶೋಧನೆ ನಡೆಸುವುದು ಇಲ್ಲಿನ ಕೆಲಸ. ಈ ಸಂಶೋಧನೆಗಳ ಫಲವನ್ನು (ತೀರ್ಮಾನ) ಟೆಕ್ನಿಕಲ್ ಮ್ಯಾನ್‍ಪವರ್ ಬುಲೆಟಿನ್ ಎಂಬ ಪತ್ರಿಕೆಯ ಮೂಲಕ ಪ್ರಕಟಿಸಿ ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿಯ ಬಗ್ಗೆ ಅನುಸರಿಸಬೇಕಾದ ನೀತಿ, ನೇಮಕ ಮತ್ತು ಅಂಥ ಜನಶಕ್ತಿಯನ್ನು ಒದಗಿಸಲು ಅನುಸರಿಸಬೇಕಾದ ಯೋಜನೆ-ಇವೆಲ್ಲದರ ಬಗ್ಗೆ ಸಂಬಂಧಿಸಿದವರಿಗೆ ಶಾಸ್ತ್ರೀಯ ಮಾಹಿತಿಯನ್ನೊದಗಿಸಿ ಸಹಾಯ ಮಾಡುತ್ತದೆ.          
 ಇದು ವಿಜ್ಞಾನಿಗಳ ಒಂದು ನಿಕಾಯವನ್ನೂ (ಸೈಂಟಿಸ್ಟ್ಸ್ ಪೂಲ್) ನಡೆಸುತ್ತದೆ; ವಿಶೇಷಜ್ಞರಿಗೆ ತಾತ್ಕಾಲಿಕವಾಗಿ ಕೆಲಸ ದೊರಕಿಸುತ್ತದೆ; ಹಾಗೂ ಅನ್ಯದೇಶಗಳಿಂದ ಶಿಕ್ಷಣ ಪಡೆದು ಹಿಂದಿರುಗತಕ್ಕವರಿಗೆ ಸಹಾಯ ಮಾಡುತ್ತದೆ; ಹೊಸದಾಗಿ ಶಿಕ್ಷಣ ಮುಗಿಸಿ ಅನ್ಯದೇಶಗಳಿಂದ ಹಿಂದಿರುಗುವ ಭಾರತೀಯರ ಬಗ್ಗೆ ವಿಶೇಷ ಅಧ್ಯಯನ ನಡೆಸಿ ಅವರಿಗೆ ಸೂಕ್ತ ರೀತಿಯ ಕೆಲಸ ದೊರಕಿಸುವ ಬಗ್ಗೆಯೂ ಸಂಶೋಧನೆ ನಡೆಸಲಾಗುತ್ತಿದೆ.

   35. ಪ್ರಕಟನೆ ಮತ್ತು ಸಮಾಚಾರ ನಿರ್ವಾಹಕ ಕಛೇರಿ (ಡೈರೆಕ್ಟೊರೇಟ್ ಆಫ್ ಪಬ್ಲಿಕೇಷನ್ ಅಂಡ್ ಇನ್ಫರ್ಮೇಷನ್), ದೆಹಲಿ : ಭಾರತದ ಕಚ್ಚಾವಸ್ತುಗಳನ್ನೂ ಔದ್ಯೋಗಿಕ ಉತ್ಪನ್ನಗಳನ್ನೂ ಕುರಿತು 'ಭಾರತದ ಸಂಪತ್ತು (ವೆಲ್ತ್ ಆಫ್ ಇಂಡಿಯ) ಎಂಬ ಮಾಲೆಯಲ್ಲಿ ಪ್ರಕಟಿಸುತ್ತಿರುವ ವಿಶ್ವಕೋಶ ಇದರ ಪ್ರಧಾನ ಪ್ರಕಟನೆ. ಜೊತೆಗೆ, ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನ ಪತ್ರಿಕೆ (ಜರ್ನಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್), ಭಾರತೀಯ ಉದ್ಯೋಗ ವಿಜ್ಞಾನ ಪತ್ರಿಕೆ, ಭಾರತೀಯ ರಸಾಯನಶಾಸ್ತ್ರದ ಪತ್ರಿಕೆ, ಭಾರತೀಯ ಶುದ್ಧ ಮತ್ತು ಅನ್ವಯದ ಭೌತಶಾಸ್ತ್ರ ಪತ್ರಿಕೆ, ಪ್ರಾಯೋಗಿಕ ಜೀವವಿಜ್ಞಾನ, ಭಾರತೀಯ ಜೀವರಸಾಯನಶಾಸ್ತ್ರ, ಸಂಶೋಧನೆ ಮತ್ತು ಉದ್ಯೋಗಗಳ ಪತ್ರಿಕೆ-ಮುಂತಾದ ಪತ್ರಿಕೆಗಳ ಮೂಲಕವೂ ಪ್ರಯೋಗಾಲಯಗಳಲ್ಲಿ ನಡೆದಿರುವ ಸಂಶೋಧನೆಯ ಫಲಗಳನ್ನು ಉದ್ಯೋಗಗಳಿಗೆ ಒದಗಿಸುತ್ತದೆ.

   36. ಪ್ರಮಾಣ (ಆಧಾರ) ಒದಗಿಸುವ ಕೇಂದ್ರ : ಭಾರತ ರಾಷ್ಟ್ರೀಯ ವೈಜ್ಞಾನಿಕ ದಾಖಲೆಗಳ ಕೇಂದ್ರ ಯುನೆಸ್ಕೊದ ತಾಂತ್ರಿಕ ನೆರವಿನಿಂದ ಆರಂಭವಾಗಿದ್ದು ದೇಶದ ವಿವಿಧ ಸಂಸ್ಥೆಗಳಿಗೂ ವ್ಯಕ್ತಿಗಳಿಗೂ ಆಧಾರಗಳನ್ನು ದೊರಕಿಸಿಕೊಳ್ಳಲು ಅಗತ್ಯ ಸೌಲಭ್ಯಗಳನ್ನೊದಗಿಸುತ್ತದೆ. ಇದು 'ಭಾರತೀಯ ವಿಜ್ಞಾನದ ಸಾರಾಂಶ (ಇಂಡಿಯನ್ ಸೈನ್ಸ್ ಆಬ್‍ಸ್ಟ್ರ್ಯಾಕ್ಟ್ಸ್-1965) ಎಂಬ ಮಾಸಪತ್ರಿಕೆಯನ್ನೂ 'ಗ್ರಂಥಾಲಯ ವಿಜ್ಞಾನದ ಚರಿತ್ರಲೇಖನಗಳು (ಆನಲ್ಸ್ ಆಫ್ ಲೈಬ್ರರಿ ಸೈನ್ಸ್ ಅಂಡ್ ಡಾಕ್ಯುಮೆಂಟೇಷನ್ ಕ್ವಾರ್ಟರ್ಲಿ-1954) ಎಂಬ ತ್ರೈಮಾಸಿಕ ಪತ್ರಿಕೆಯನ್ನೂ ಪ್ರಕಟಿಸುತ್ತದೆ.

   37. ಸಂಪರ್ಕ ಮತ್ತು ವಿಸ್ತರಣ (ಪ್ರಸಾರ) ಸೇವೆ : ಮೇಲೆ ಉಲ್ಲೇಖಿಸಿದ ಪ್ರತಿಯೊಂದು ರಾಷ್ಟ್ರೀಯ ಪ್ರಯೋಗಾಲಯದಲ್ಲೂ ಉದ್ಯಮಿಗಳೊಡನೆಯೂ ಕೈಗಾರಿಕಾ ಸಂಸ್ಥೆಗಳೊಡನೆಯೂ ವಾಣಿಜ್ಯ ಸಂಘಗಳೊಡನೆಯೂ ಸಂಪರ್ಕ ಕಲ್ಪಿಸುವುದಕ್ಕಾಗಿ ವ್ಯವಸ್ಥೆಗೊಂಡ ಪ್ರತ್ಯೇಕ ಘಟಕ (ಲಯಸಾನ್ ಮತ್ತು ಎಕ್ಸ್ಟೆನ್‍ಷನ್ ಸರ್ವಿಸಸ್). ಇದು ಅವರ ಸಮಸ್ಯೆಗಳನ್ನು ಸಂಗ್ರಹಿಸಿ ಅದನ್ನು ನಿವಾರಿಸಿಕೊಡಲು, ಸೂಕ್ತ ಸಂಶೋಧನೆಯ ಯೋಜನೆಯನ್ನು ರೂಪಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ, ಪ್ರಯೋಗಾಲಯ ಕಂಡುಹಿಡಿದ ಅಂಶಗಳನ್ನು ಅವರಿಗೆ ದೊರಕಿಸಿ ಕೊಡಲೂ ನೆರವಾಗುತ್ತದೆ.    			
 (ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ